ಟ್ರಿಪ್ಯಾನಸೋಮೈಯಸಿಸ್
	ಟ್ರಿಪ್ಯಾನಸೋಮ ಎಂಬ ಏಕಕೋಶಿಕ ಜೀವಿಯ (ಪ್ರೋಟೊeóÉೂೀವ) ಪ್ರಭೇದಗಳ ಸೋಂಕಿನಿಂದ ಉಂಟಾದ ರೋಗಪರಿಸ್ಥಿತಿ. ಟ್ರಿಪ್ಯಾನಸೋಮ ಮಾನವರಲ್ಲೆ ಅಲ್ಲದೆ ಮಂಗಗಳು, ಕತ್ತೆ, ಕುದುರೆ, ಹೇಸರಕತ್ತೆ, ದನ, ಕುರಿ, ಮೇಕೆ, ನಾಯಿ, ಒಂಟೆ, ಆನೆ ಮುಂತಾದ ಸಾಕುಪ್ರಾಣಿಗಳಲ್ಲೂ ಬಾವಲಿ, ಕಾಡೆಮ್ಮೆ, ಜಿಂಕೆ, ಕಾಡಿನಲ್ಲಿರುವ ಇತರ ಶಿಕಾರಿ ಪ್ರಾಣಿಗಳಲ್ಲೂ ಇರುತ್ತದೆ. ಸಸ್ತನಿಗಳಲ್ಲದ ಇತರ ಕಶೇರುಕವರ್ಗಗಳಿಗೆ ಸೇರಿದ ಪಕ್ಷಿ, ಹಾವು ಹಲ್ಲಿಗಳು ಮೊಸಳೆ ಆಮೆಗಳು, ಕಪ್ಪೆ ಮೀನುಗಳಲ್ಲಿಯೂ ಟ್ರಿಪ್ಯಾನಸೋಮ ಆಯಾ ಜೀವಿಗಳ ರಕ್ತದಲ್ಲಿ ಪರಾವಲಂಬಿಜೀವಿಯಾಗಿ ವಾಸಿಸುತ್ತದೆ. ಸಸ್ತನಿಗಳನ್ನು ಬಿಟ್ಟು ಉಳಿದ ಕಡೆ ಟ್ರಿಪ್ಯಾನಸೋಮ ನಿರುಪದ್ರವಿ. ಸಸ್ತನಿಗಳಲ್ಲಿರುವ ಟ್ರಿಪ್ಯಾನಸೋಮಗಳಲ್ಲೂ ಎಲ್ಲವೂ ರೋಗಕಾರಕಗಳಲ್ಲ. ಟ್ರಿಪ್ಯಾನಸೋಮದ ಇರುವಿಕೆಯಿಂದ ರೋಗ ಉಂಟಾದರೆ ಮಾತ್ರ ಆ ಸ್ಥಿತಿಯನ್ನು ಟ್ರಿಪ್ಯಾನಸೋಮೈಯಸಿಸ್ ಎಂದು ಕರೆಯುವುದು ವಾಡಿಕೆ.

	ಮಾನವರ ಟ್ರಿಪ್ಯಾನಸೋಮೈಯಸಿಸ್ಸಿನಲ್ಲಿ ಎರಡು ಬಗೆ : ಆಫ್ರಿಕಖಂಡದ್ದು ಮತ್ತು ದಕ್ಷಿಣ ಅಮೆರಿಕ ಖಂಡದ್ದು. ಆಫ್ರಿಕದ ಟ್ರಿಪ್ಯಾನಸೋಮೈಯಸಿಸ್ ಟ್ರಿಪ್ಯಾನಸೋಮ ಗಾಂಬಿಯೆನ್ಸಿ ಮತ್ತು ಟ್ರಿ. ರೋಡೀಸಿಯೆನ್ಸಿ ಎಂಬ ಎರಡು ಪ್ರಭೇದಗಳಿಂದ ಉಂಟಾಗುತ್ತದೆ. ಸೋಂಕು ಮಾನವರಿಂದ ಮಾನವರಿಗೆ ಟ್ಸೆಟ್ಸೀ ನೊಣಗಳ (ಗ್ಲಾಸೀನ ಪ್ರಭೇದಗಳು) ಕಡಿತದಿಂದ ಹರಡುತ್ತದೆ. ರೋಗಿಯ ರಕ್ತದಲ್ಲಿರುವ ಟ್ರಿಪ್ಯಾನಸೋಮಗಳು ನೊಣದ ದೇಹದಲ್ಲಿ ಎರಡು ಮೂರು ವಾರ ಬೆಳೆದು ಸಂಖ್ಯೆ ವೃದ್ಧಿಸಿ ಅದರ ಲಾಲಾ ಗ್ರಂಥಿಗಳನ್ನು ಸೇರುತ್ತವೆ. ಇಂಥ ನೊಣ ಇನ್ನೊಬ್ಬ ವ್ಯಕ್ತಿಯನ್ನು ಕಡಿದಾಗ ಟ್ರಿಪ್ಯಾನಸೋಮಗಳು ಆ ವ್ಯಕ್ತಿಯ ದೇಹದೊಳಗೆ ಸೇರುತ್ತವೆ. ನೊಣಗಳು ನೇರಬಿಸಿಲಿಲ್ಲದ ಉಷ್ಣ ಹಾಗೂ ತೇವವಾಗಿರುವ ಸ್ಥಳಗಳಲ್ಲಿ ಮಾತ್ರ ವೃದ್ಧಿಸಬಲ್ಲವಾದ್ದರಿಂದ ದ. ಆಫ್ರಿಕದ ನದಿ ಹಾಗೂ ತೀರಪ್ರದೇಶಗಳ ಕಾಡುಗಳಲ್ಲಿ ವಿಶೇಷವಾಗಿ ಇರುತ್ತವೆ. ಆದ್ದರಿಂದ ಇಂಥ ಪ್ರದೇಶಗಳಲ್ಲಿ ಟ್ರಿಪ್ಯಾನಸೋಮೈಯಸಿಸ್ ಸಾಮಾನ್ಯ. ಗ್ಲಾಸಿನ ಪ್ಯಾಲ್ಪ್ಯಾಲಿಸ್ ನೊಣ ಗ್ಯಾಂಬಿಯಾ ನದಿಯ ದಡದ ಕಾಡುಗಳಲ್ಲಿದ್ದು ಪಶ್ಚಿಮ ಮತ್ತು ಮಧ್ಯ ಆಫ್ರಿಕದಲ್ಲಿ ಟ್ರಿ. ಗ್ಯಾಂಬಿಯೆನ್ಸಿ ಪ್ರಭೇದದ ಸೋಂಕು ಹರಡುವಿಕೆಗೆ ಕಾರಣವಾಗಿದೆ. ಗ್ಲಾ. ಮಾರ್ಸಿಟಾನ್ಸ್ ನೊಣ ರೊಡೀಸಿಯ ಮತ್ತು ಪೂರ್ವ ಆಫ್ರಿಕ ತೀರಪ್ರದೇಶದ ಕಾಡುಗಳಲ್ಲಿ ಟ್ರಿ. ರೊಡೀಸಿಯೆನ್ಸಿ ಪ್ರಭೇದದ ಸೋಂಕನ್ನು ಹರಡುತ್ತದೆ. ಈ ಟ್ರಿಪ್ಯಾನಸೋಮ ಪ್ರಭೇದಗಳಿಗೆ ಈ ಪ್ರಾಂತ್ಯಗಳಲ್ಲಿರುವ ಸಾಕುಪ್ರಾಣಿಗಳು ಹಾಗೂ ವನ್ಯಮೃಗಗಳು ಸ್ವಾಭಾವಿಕ ಸಂಗ್ರಹಸ್ಥಳಗಳಾಗಿರಬಹುದು ಎನ್ನಿಸಿದೆ. ಟ್ಸೆಟ್ಸಿನೊಣಗಳು ಅವುಗಳ ರಕ್ತವನ್ನು ಹೀರಿ ಟ್ರಿಪ್ಯಾನೇಸೊಮಗಳನ್ನು ಆಗಿಂದಾಗ್ಗೆ ಪಡೆಯುತ್ತವೆ. ಮತ್ತು ಮಾನವರಿಗೂ ವರ್ಗಮಾಡುತ್ತವೆ ಎಂದು ತೋರುತ್ತದೆ. ಟ್ರಿ. ಗ್ಯಾಂಬಿಯೆನ್ಸಿ ಮತ್ತು ರೊಡೀಸಿಯೆನ್ಸಿಗಳ ಸೋಂಕಿನಿಂದ ಮಾನವರಿಗೆ ಬರುವ ರೋಗ ಜೋಗರಿಕೆ ಬೇನೆ ಅಥವಾ ನಿದ್ರಾಬೇನೆ (ಸ್ಲೀಪಿಂಗ್ ಸಿಕ್‍ನೆಸ್). ಟ್ರಿ. ಗ್ಯಾಂಬಿಯೆನ್ಸಿ ಸೋಂಕಿನಿಂದ ಜ್ವರ ತತ್‍ಕ್ಷಣವೇ ಕಂಡುಬಂದರೂ ರೋಗಪ್ರಬಲಿಸಬೇಕಾದರೆ ಎರಡು ಮೂರು ವರ್ಷಗಳಾಗಬಹುದು. ನೊಣಕಡಿತದಿಂದ ದೇಹದೊಳಹೊಕ್ಕ ಟ್ರಿಪ್ಯಾನಸೋಮಗಳು ರಕ್ತದುಗ್ಧರಸಗಳ ಮೂಲಕ ಯಕೃತ್ತು. ಗುಲ್ಮ, ನರವ್ಯೂಹ ಮುಂತಾಗಿ ದೇಹದ ಎಲ್ಲಡೆಯೂ ವ್ಯಾಪಿಸುತ್ತವೆ. ನೊಣ ಕಡಿದ ಸ್ಥಳದಲ್ಲಿ ತೀವ್ರನೋವು ಊತಗಳು ಉಂಟಾಗುತ್ತವೆ. ಒಂದು ವಾರದ ಬಳಿಕ ಆ ಸ್ಥಳ ನೇರಿಳೆ ಬಣ್ಣಕ್ಕೆ ತಿರುಗಿ ಕಡಿತ ಕೆರೆತಗಳಿಂದ ವ್ರಣವಾಗಿ ನಿಧಾನವಾಗಿ ಮಾಯವಾಗುತ್ತದೆ. ಈ ಕಾಲದಲ್ಲಿ ಮತ್ತು ಇನ್ನೆರಡು ವಾರಗಳ ಪರ್ಯಂತ ಟ್ರಿಪ್ಯಾನಸೋಮಗಳು ವ್ಯಕ್ತಿಯ ದೇಹದಲ್ಲಿ ವೃದ್ಧಿಗೊಳ್ಳುತ್ತ, ಹಬ್ಬುತ್ತ, ಕೊನೆಗೆ ಜ್ವರ, ಸುಸ್ತು, ತಲೆನೋವು, ಗುಂಡಿಗೆಯ ವೇಗಮಿಡಿತಗಳನ್ನು ಉಂಟುಮಾಡುತ್ತವೆ. ಇಂಥ ಸ್ಥಿತಿಗೆ ಗ್ಯಾಂಬಿಯ ಜ್ವರವೆಂದು ಹೆಸರು. ದುಗ್ಧರಸಗ್ರಂಥಿಗಳು ದೊಡ್ಡವಾಗಿ ಸೋಂಕು ಕ್ರಮೇಣ ನರವ್ಯೂಹಕ್ಕೆ ವ್ಯಾಪಿಸಿದ ಬಳಿಕ ಜೋಗರಿಕೆ ಬೇನೆಯ ಲಕ್ಷಣಗಳು ಸ್ಪಷ್ಟವಾಗಿ ಕಾಣಿಸಿಕೊಳ್ಳುತ್ತವೆ. ಚಿತ್ತಕೆರಳಿಕೆ, ಗಲಿಬಿಲಿ, ಮಸಕಾದ ನೆನಪು, ನಿರಾಸಕ್ತಿ, ವ್ಯಕ್ತಿತ್ವನಾಶ ಮುಂತಾದವು ಕಂಡುಬಂದು ವ್ಯಕ್ತಿ ಸದಾಕಾಲವೂ ಜೋಗರಿಸುತ್ತಿರುವಂತೆಯೋ ನಿದ್ರೆಮಾಡುತ್ತಿರುವಂತೆಯೋ ಕಾಣಿಸುತ್ತದೆ. ಊಟಮಾಡುವುದಕ್ಕೂ ಆತನನ್ನು ಎಚ್ಚರಿಸಬೇಕು. ಊಟಮಾಡುತ್ತಿರುವಾಗಲೇ ತೂಕಡಿಸುತ್ತ ವ್ಯಕ್ತಿ ಮುದುರಿಕೊಳ್ಳುವುದು ಸಾಮಾನ್ಯ. ಮುಖದಲ್ಲಿ ಬಾವು, ಸ್ನಾಯುಸೆಳೆತ, ಕೀಲುನೋವು, ಅಸ್ಥಿರನಡಿಗೆ, ತುಟಿನಾಲಿಗೆ ಕೈಗಳು ಅದಿರುವಿಕೆ. ನಿಧಾನವಾದ ಮಾತು ಇವು ಇತರ ಲಕ್ಷಣಗಳು. ರಕ್ತ ಮತ್ತು ಮಿದುಳುಬಳ್ಳಿದ್ರವಗಳಲ್ಲಿ ಟ್ರಿಪ್ಯಾನಸೋಮಗಳಿರುವುದನ್ನು ಸೂಕ್ಷ್ಮದರ್ಶಕ ಪರೀಕ್ಷೆಯಿಂದ ಸ್ಥಿರಪಡಿಸಿಕೊಳ್ಳಬಹುದು. ರೋಗಕ್ಕೆ ಚಿಕಿತ್ಸೆ ಮಾಡದಿದ್ದರೆ ಕ್ರಮೇಣ 5-6 ವರ್ಷಗಳಲ್ಲಿ ಅದು ಮಾರಕವಾಗಬಹುದು. ಈ ನಡುವೆ ಆಗಿಂದಾಗ ರೋಗ ತಾನಾಗಿಯೇ ಗುಣವಾಯಿತೇನೋ ಎನ್ನುವಂತಿರುತ್ತದೆ. ಬಹುಶಃ ಇವು ಟ್ರಿಪ್ಯಾನಸೋಮಗಳಿಗೆ ಪ್ರತಿಕೂಲಕಾಲ. ಈ ಕಾಲದಲ್ಲಿ ಅವು ಯಕೃತ್ತು, ಗುಲ್ಮ, ಫುಪ್ಫುಸ ಇಂಥ ಸ್ಥಳಗಳಲ್ಲಿ ಕೋಶಗಳ ಒಳಹೊಕ್ಕು ಚಬುಕನ್ನು (ಫ್ಲಾಜೆಲ್ಲಮ್) ಕಳೆದುಕೊಂಡು ಅಂಡಾಕಾರವಾಗಿ ಸುಪ್ತಾವಸ್ಥೆಯಲ್ಲಿರುತ್ತವೆ. ಪರಿಸ್ಥಿತಿ ಅನುಕೂಲವಾದೊಡನೆ ಚಬುಕನ್ನು ಬೆಳೆಸಿ ಚೇತರಿಸಿಕೊಂಡು ಮತ್ತೊಮ್ಮೆ ತಮ್ಮ ದೇಹ ಚಟುವಟಿಕೆಗಳನ್ನು ಮೊದಲು ಮಾಡುತ್ತವೆ. ರೋಗ ಆಗ ಮರುಕಳಿಸಿದಂತೆ ತೋರುತ್ತದೆ. 

	ಟ್ರಿ. ರೊಡೀಸಿಯೆನ್ಸಿ ಸೋಂಕಿನಲ್ಲಿ ರೋಗ ಬಹುಬೇಗ ತೀವ್ರವಾಗುತ್ತ ಸುಮಾರು ಒಂದು ವರ್ಷದಲ್ಲೆ ಮಾರಕವಾಗಿ ಪರ್ಯವಸಾನಗೊಳ್ಳುತ್ತವೆ. ಸೋಂಕು ರಕ್ತದ ಮೂಲಕ ವ್ಯಾಪಿಸುತ್ತ ನಾಲ್ಕಾರು ವಾರಗಳಲ್ಲಿ ನರವ್ಯೂಹವನ್ನು ಸೇರಿ ಜೋಗರಿಕೆ ಸ್ಥಿತಿ ವಗೈರೆಗಳನ್ನು ಉಂಟುಮಾಡುತ್ತದೆ. ಆಫ್ರಿಕದ ಟ್ರಿಪ್ಯಾನಸೋಮೈಯಸಿಸ್ಸಿನಿಂದ ಬರುವ ಈ ನಿದ್ರಾಬೇನೆಗೆ ಚಿಕಿತ್ಸೆಗಳು ಸುರಾಮಿನ್. ಪೆಂಟಾಮಿಡಿನ್ ಐಸೋಥೈಯೋನೇಟ್, ಪೆಂಟಾಮಿಡೀನ್ ಮಿಥೇನ್ ಸಲ್ಫೋನೇಟ್. ಇವು ರಕ್ತ ಮತ್ತು ಮಿದುಳುಬಳ್ಳಿರಸದಲ್ಲಿರುವ ಟ್ರಿಪ್ಯಾನಸೋಮಗಳನ್ನು ನಾಶಮಾಡುತ್ತವೆ. ಮೆಲಾರ್ಸೋಪ್ರಾಲ್, ಮೆಲಾರ್ಸೊನೈಲ್ ಪೊಟ್ಯಾಸಿಯಮ್, ಟ್ರಿಪಾರ್ಸಮೈಡ್ ಮತ್ತು ನೈಟ್ರೊಫ್ಯೂರಜೋಲುಗಳನ್ನೂ ಚಿಕಿತ್ಸೆಗೆ ಉಪಯೋಗಿಸುತ್ತಾರೆ.

	ದಕ್ಷಿಣ ಅಮೆರಿಕದ ಟ್ರಿಪ್ಯಾನಸೋಮೈಯಸಿಸ್ ; ಶ್ಯಾಗನವ್ಯಾಧಿ ಎಂದೂ ಹೆಸರುಂಟು. ಇದು ಟ್ರಿ. ಕ್ಲೂಸಿಯೈ ಎಂಬ ಪ್ರಭೇದದ ಸೋಂಕಿನಿಂದುಂಟಾದುದು. ದಕ್ಷಿಣ ಅಮೆರಿಕದ ಬ್ರಜಿóಲ್, ಪೆರು, ವೆನಿಜೂóಲಾ ಪ್ರಾಂತ್ಯಗಳಲ್ಲಿ ಮಧ್ಯ ಅಮೆಕರಿಕದ ಕೆಲವುÅ ಭಾಗಗಳಲ್ಲಿ ಮಾತ್ರ ಕಂಡುಬರುತ್ತದೆ. ಮಾನವನಿಂದ ಮಾನವನಿಗೆ ಸೋಂಕು ತಿಗಣೆಗಳಿಂದ ಹಬ್ಬುತ್ತದೆ. ತಿಗಣೆಯ ದೇಹದಲ್ಲಿ ಕೆಲವು ದಿವಸಗಳು ಬೆಳೆದ ಬಳಿಕ ಟ್ರಿಪ್ಯಾನಸೋಮಗಳು ಮಾನವರಲ್ಲಿ ರೋಗಕಾರಕಗಳಾಗುವ ಸಾಮಥ್ರ್ಯವನ್ನು ಪಡೆಯುತ್ತವೆ. ತಿಗಣೆಗಳು ಕಚ್ಚಿ ರಕ್ತಹೀರುವಾಗ ಅವನ್ನು ಹಿಚುಕಿ ಹಾಕುವುದೂ ಕಡಿದ ಸ್ಥಳವನ್ನು ಕೆರೆದುಕೊಂಡು ಗಾಯಗೊಳಿಸಿ ಕೊಳ್ಳುವುದೂ ಸಾಮಾನ್ಯ. ಇಂಥ ಸಂದರ್ಭಗಳಲ್ಲಿ ತಿಗಣೆಯ ಮಲದಲ್ಲಿ ವಿಸರ್ಜಿತವಾಗುವ ಟ್ರಿಪ್ಯಾನಸೋಮಗಳು ಗಾಯದ ಮೂಲಕ ಮಾನವ ದೇಹವನ್ನು ಪ್ರವೇಶಿಸುತ್ತವೆ. ರೋಗ ಸಣ್ಣ ಮಕ್ಕಳಲ್ಲಿ ವಿಶೇಷವಾಗಿ ಕಂಡು ಬರುತ್ತದೆ. ತಿಗಣೆ ಕಡಿದ ಸ್ಥಳದಲ್ಲಿ ಸಣ್ಣ ಗಂಟಾಗುತ್ತದೆ. ದುಗ್ಧರಸದ ಮೂಲಕ ಟ್ರಿಪ್ಯಾನಸೋಮಗಳು ದೇಹದ ಎಲ್ಲ ಕಡೆಗೂ ವ್ಯಾಪಿಸುತ್ತವೆ. ಯಕೃತ್ತು, ಗುಲ್ಮ, ಸ್ನಾಯುಗಳು, ಗುಂಡಿಗೆ ಇವುಗಳ ಕೋಶಗಳನ್ನು ಹೊಕ್ಕು, ಸುಮಾರು ಮೂರು ವಾರಗಳಲ್ಲಿ ತಮ್ಮ ಪ್ರಭಾವದಿಂದ ಏಕಾಏಕಿ ರೋಗಲಕ್ಷಣಗಳನ್ನು ಹೊರಪಡಿಸುತ್ತವೆ. ಹಣೆ, ರೆಪ್ಪೆ, ಕೆನ್ನೆ, ತುಟಿ ಇವುಗಳ ಊತ, ಸ್ಥಳೀಯ ದುಗ್ಧರಸಗ್ರಂಥಿಗಳ ಗಾತ್ರವೃದ್ಧಿ, ಜ್ವರ, ಗುಂಡಿಗೆಯ ಮಿಡಿತಗಳಲ್ಲಿ ಅಕ್ರಮ ಈ ಲಕ್ಷಣಗಳು ಕಂಡು ಬಂದು ಕೊನೆಗೆ ಗುಂಡಿಗೆಯ ದೌರ್ಬಲ್ಯದಿಂದ ಸಾವು ಉಂಟಾಗುತ್ತದೆ. ನರವ್ಯೂಹದ ಮೇಲೆ ಪರಿಣಾಮ ಅಷ್ಟಾಗಿ ಕಂಡು ಬರುವುದಿಲ್ಲ. ರೋಗ ಚಿಕಿತ್ಸೆ ಅಸಮರ್ಪಕ. ಆಫ್ರಿಕದ ಟ್ರಿಪ್ಯಾನಸೋಮೈಯಸಿಸ್ಸಿನ ಚಿಕಿತ್ಸಕಗಳು ಇಲ್ಲಿ ಉಪಯುಕ್ತವೆನಿಸಿಲ್ಲ. ಆರ್ಸಿನೋ ಬೆನ್eóÉೈಲ್ ಸಲ್ಫೇಟನ್ನು ಚಿಕಿತ್ಸಕವಾಗಿ ಪ್ರಯತ್ನಿಸಬಹುದು. ಕೀಟನಾಶಕಗಳಿಂದ ತಿಗಣೆಗಳನ್ನು ನಾಶಪಡಿಸಿ ರೋಗದ ಹಬ್ಬುವಿಕೆಯನ್ನು ತಡೆಗಟ್ಟುವುದು ಮೇಲು.

	ಕುದುರೆ ಮತ್ತು ಒಂಟೆಗಳಲ್ಲಿ ಕಂಡುಬರುವ ಟ್ರಿಪ್ಯಾನಸೋಮೈಯಸಿಸ್ಸುಗಳು ಹಲವು ಬಗೆ. ಭಾರತದ ಕುದುರೆ ಒಂಟೆಗಳಲ್ಲಿ ಉಂಟಾಗುವ ಸರ್ರ ಎಂಬ ರೋಗಸ್ಥಿತಿ ಒಂದು. ಈ ರೋಗಕ್ಕೆ ಕಾರಣ ಟ್ರಿಪ್ಯಾನಸೋಮ ಎಂಬುದನ್ನು ಭಾರತದಲ್ಲಿ ಪಶುವೈದ್ಯಾಧಿಕಾರಿಯಾಗಿದ್ದ ಗ್ರಿಫಿತ್ ಇವಾನ್ಸ್ ಎಂಬಾತ 1880ರಲ್ಲಿ ತೋರಿಸಿದ್ದ. ಟ್ರಿಪ್ಯಾನಸೋಮದ ಈ ಪ್ರಭೇದಕ್ಕೆ ಟ್ರಿ. ಇವಾನ್ಸಿ ಎಂದೇ ಹೆಸರಿಡಲಾಯಿತು. ಪ್ರಾಣಿಯಿಂದ ಪ್ರಾಣಿಗೆ ಸೋಂಕು ಟೆಬೆನಾಸ್ ಮತ್ತು ಇತರ ವಿವಿಧ ನೊಣಗಳ ಕಡಿತದಿಂದ ಹರಡುತ್ತದೆ. ಟ್ರಿಪ್ಯಾನಸೋಮವು ನೊಣದಲ್ಲಿ ಯಾವ ರೀತಿಯ ಬೆಳವಣಿಗೆಯನ್ನೂ ತೋರದೆ ನೊಣದ ದೇಹದೊಳಕ್ಕಂತೆಯೇ ಯಾಂತ್ರಿಕವಾಗಿ ಹೊರಬಿದ್ದು ಬೇರೆ ಕುದುರೆ ಅಥವಾ ಒಂಟೆಯ ದೇಹವನ್ನು ಸೇರುತ್ತವೆ. ಇದು ಈ ಟ್ರಿಪ್ಯಾನಸೋಮ ಪ್ರಭೇದದ ವೈಶಿಷ್ಟ್ಯ. ಟ್ರಿ. ಇವಾನ್ಸಿ ಬೇರೆ ಸಸ್ತನಿಗಳಲ್ಲಿಯೂ ಕಂಡುಬರಬಹುದು. ಇವುಗಳಲೆಲ್ಲ ಈ ಏಕಕೋಶಿಕ ನಿರುಪದ್ರವಿಯಾದರೂ ಒಂಟೆ ಕುದುರೆಗಳಲ್ಲಿ ಒಂದೆರಡು ತಿಂಗಳಲ್ಲೆ ಮಾರಕವಾಗಿ ಪರಿಣಮಿಸುವುದು. ಸೋಂಕು ತಗುಲಿದ ಎರಡರಿಂದ ಎಂಟು ದಿವಸಗಳಲ್ಲಿ ರೋಗ ಚಿಹ್ನೆಗಳು ಪ್ರಾರಂಭವಾಗುತ್ತದೆ. ಜ್ವರ, ಹಸಿವಿಲ್ಲದಿರುವಿಕೆ, ಮೈಮೇಲೆ ಅಲ್ಲಲ್ಲಿ ಗಂಧೆಗಳು ಇವು ಪ್ರಾರಂಭಿಕ ಹಾಗೂ ಅನಿಶ್ಚಿತ ಲಕ್ಷಣಗಳು. ಮುಂದಕ್ಕೆ ಕಾಣಬರುವುದು ನೆಗಡಿ, ದವಡೆ ಕೆಳಗಿನ ಗ್ರಂಥಿಗಳ ಊತ, ದೇಹಕೃಶವಾಗುವಿಕೆ, ಬಿಟ್ಟು ಬಿಟ್ಟು ಬರುವ ಜ್ವರ, ಕೊನೆಗೆ ಮರಣ. ಸಾವು ಹತ್ತಿರ ಬಂದಂತೆ ಹಿಂದಿನ ಕಾಲುಗಳ ಮೇಲೆ ಹತೋಟಿ ತಪ್ಪುತ್ತದೆ. ಕೆಲವು ಸಂದರ್ಭಗಳಲ್ಲಿ ಪ್ರಾಣಿ ಅತಿಯಾದ ನೋವಿನಿಂದ ತೀವ್ರವಾಗಿ ಒದ್ದಾಡಿ ಆಯಾಸದಿಂದ ಪ್ರಾಣಬಿಡುತ್ತದೆ. ಚಿಕಿತ್ಸೆಗೆ ಸುರಾಮಿನ್ ಉಪಯೋಗಿಸಬಹುದು ; ತೃಪ್ತಿಕರವಲ್ಲ.

	ಕುದುರೆಯ ಇನ್ನೊಂದು ಟ್ರಿಪ್ಯಾನಸೋಮೈಯಸಿಸ್ಸಿಗೆ ಡೌರಿನ್ ಎಂದು ಹೆಸರು. ಇದು ಟ್ರಿ. ಇಕ್ವಿಪರ್ಡಮ್ ಎಂಬ ಪ್ರಭೇದದ ಸೋಂಕಿನಿಂದುಂಟಾದುದು. ಸಂಭೋಗಕಾರ್ಯದಿಂದ ರೋಗಿಷ್ಟ ಪ್ರಾಣಿಯಿಂದ ಇನ್ನೊಂದು ಪ್ರಾಣಿಗೆ ಸೋಂಕು ಹಬ್ಬುವುದು ಇದರ ವೈಶಿಷ್ಟ್ಯ. ರೋಗ ತಗುಲಿದಾಗ ಮೊದಲು ಜನನಾಂಗಗಳು ಊದಿಕೊಳ್ಳುತ್ತವೆ. ಮೂತ್ರವಿಸರ್ಜನೆ ಮಾಡುವಾಗ ನೋವಾಗುತ್ತದೆ. ಸುಮಾರು ಒಂದು ತಿಂಗಳಲ್ಲಿ ದೇಹದ ಅನೇಕ ಭಾಗಗಳಲ್ಲಿ ಚರ್ಮದ ಕೆಳಗೆ ಅಲ್ಲಲ್ಲಿ ತಗಡಿನ ಚೂರುಗಳಿರುವಂತೆ ಸ್ಥಳಗಳು ಗಡುಸಾಗುತ್ತವೆ (ಪ್ಲೇಕ್ಸ್). ಆದರೆ ಈಗ ಗಡಸು ಸ್ಥಳಗಳು ಬಿಸಿಯಾಗಿರುವುದಿಲ್ಲ. ನೋಯುವುದು ಇಲ್ಲ. ಸುಮಾರು ಹತ್ತು ತಿಂಗಳಾಗುವಷ್ಟರಲ್ಲಿ ರಕ್ತಹೀನತೆ ಹಾಗೂ ಕಾಲುಗಳು ಸ್ವಾಧೀನ ನಾಶಗಳು ಕಂಡುಬಂದು ಶೀಘ್ರದಲ್ಲೆ ಪ್ರಾಣಿ ಮೃತಿಹೊಂದುತ್ತದೆ. ಈ ರೋಗಕ್ಕೆ ಚಿಕಿತ್ಸೆ ಇಲ್ಲ. ರೋಗಿಷ್ಟ ಪ್ರಾಣಿಗಳು ಸಂಭೋಗಕಾರ್ಯದಲ್ಲಿ ಭಾಗವಹಿಸದಂತೆ ಅವನ್ನು ಸಾಯಿಸುವುದು ಮೇಲು.

	ಟ್ರಿ. ಥೈಲೆರಿ ಎಂಬುದು ಪ್ರಪಂಚಾದ್ಯಂತ ದನಗಳಲ್ಲಿರುವ ನಿರುಪದ್ರವಿ ಪ್ರಭೇದ. ಆದರೆ ದೊಡ್ಡ ರೋಗಕ್ಕೆ (ರಿನ್‍ಡರ್‍ಪೆಸ್ಟ್) ಲಸಿಕೆ ಹಾಕುವಿಕೆ. ಶಸ್ತ್ರಕ್ರಿಯೆಯಿಂದ ಗುಲ್ಮವನ್ನು ತೆಗೆದುಹಾಕುವುದು ಇತ್ಯಾದಿ ಒತ್ತಡ ಸಂದರ್ಭಗಳಲ್ಲಿ (ಸ್ಟ್ರೆಸ್) ಇವು ರೋಗಕಾರಕವಾಗಿ ದನಗಳಲ್ಲಿ ಗರ್ಭಪಾತ, ಹಾಲಿನ ಇಳುವರಿ ಕುಗ್ಗುವಿಕೆ. ನೆರಡಿ ರೋಗವೇನೋ ಎಂಬ ಸಂಶಯ ಹುಟ್ಟುವಂತೆ ಹಠಾತ್ ಮರಣ ಮುಂತಾದ ಸ್ಥಿತಿಗಳಿಗೆ ಕಾರಣವಾಗಬಹುದು. ವಾಸ್ತವವಾಗಿ ಥೈಲರ್ ಈ ಪ್ರಭೇದವನ್ನು ಆವಿಷ್ಕರಿಸಿದ್ದು ಗಾಲ್‍ಜಿಕ್ವ್ ಎಂಬ ವಿಚಿತ್ರವಾದ ಪಿತ್ತಕೋಶ ರೋಗದಿಂದ ನರಳುತ್ತಿದ್ದ ದನಗಳಿಂದಲೇ. ಬಹುಶಃ ಆ ರೋಗಕ್ಕೆ ಅವೇ ಕಾರಣ. 1902ರಲ್ಲಿ ಟ್ರಾನ್ಸ್‍ವಿಟ್ ಎಂಬಲ್ಲಿ ಥೈಲರ್ ಪ್ರತ್ಯೇಕಿಸಿ ವ್ಯಾಸಂಗಿಸಿದ ಈ ಪ್ರಭೇದ ಟ್ರಿಪ್ಯಾನಸೋಮಗಳಲ್ಲಿ ಅಸಾಮಾನ್ಯಗಾತ್ರದ ಪ್ರಭೇದ.

	ಕುದುರೆ, ಕತ್ತೆ, ಹೇಸರಕತ್ತೆ, ಕುರಿ, ಮೇಕೆ, ಒಂಟೆ, ಹಂದಿ, ನಾಯಿ, ದನ ಇವುಗಳಲ್ಲಿ ಕಂಡು ಬರುವ ಇನ್ನೊಂದು ಟ್ರಿಪ್ಯಾನಸೋಮೈಯಸಿಸ್ಸಿಗೆ ನಗಾನ ಎಂದು ಹೆಸರು. ಟ್ರ. ಬ್ರೂಸೈ ಎಂಬ ಪ್ರಭೇದ ಇದಕ್ಕೆ ಕಾರಣ. 1874ರಲ್ಲಿ ದಕ್ಷಿಣ ಆಫ್ರಿಕಾದಲ್ಲಿ ಬ್ರೂಸ್ ಎಂಬಾತ ಇದನ್ನು ಪ್ರಪ್ರಥಮವಾಗಿ ಆವಿಷ್ಕರಿಸಿದ್ದರಿಂದ ಈ ಪ್ರಭೇದಕ್ಕೆ ಟ್ರಿ. ಬ್ರೂಸೈ ಎಂದು ಹೆಸರಾಯಿತು. ರೋಗವು ಪ್ರಾಣಿಯಿಂದ ಪ್ರಾಣಿಗೆ ಟ್ಸೆಟ್ಸೀನೊಣಗಳ ಕಡಿತದಿಂದ ಹಬ್ಬುತ್ತದೆ. ನಗಾನ ತೀವ್ರಮಾರಕ ರೋಗ. ರೋಗತಗುಲಿದ ಒಂದೆರಡು ತಿಂಗಳಲ್ಲಿ ಪ್ರಾಣಿಗಳು ಸಾವನ್ನು ಅಪ್ಪುವುವು. ಮಾಲ್ ಡಿ ಕೆಡೆರಾನ್ ಎಂಬುದು ಕುದುರೆಗಳ ಮತ್ತೊಂದು ತೀವ್ರರೀತಿಯ ಟ್ರಿಪ್ಯಾನಸೋಮೈಯಸಿಸ್. ಅಪರೂಪವಾಗಿ ಇದು ಮೆಲಕು ಹಾಕುವ ಪ್ರಾಣಿಗಳಲ್ಲೂ ನಾಯಿಗಳಲ್ಲೂ ಕಂಡುಬರಬಹುದು. ಇದರ ಹರಡುವಿಕೆ ಹೇಗೆಂಬುದು ತಿಳಿಯದು. 

(ಪಿ.ಎಸ್.ಎಸ್.; ಕೆ.ಎನ್.ಪಿ.ಆರ್.; ಎಸ್.ಬಿ.ಎಂ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ